ಬೆಂಗಳೂರು: ಗಂಡು ಮಕ್ಕಳಲ್ಲಿ ಕಂಡುಬರುವ ಇಳಿಯದ ವೃಷಣ (Undescended Testis / Cryptorchidism) ಸಮಸ್ಯೆಯನ್ನು ನಿರ್ಲಕ್ಷಿಸಬಾರದು. ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಿ ಚಿಕಿತ್ಸೆ ನೀಡದಿದ್ದರೆ ಭವಿಷ್ಯದಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕುಂಠಿತವಾಗುವುದು, ವೃಷಣದ ಬೆಳವಣಿಗೆಯಲ್ಲಿ ತೊಂದರೆ ಉಂಟಾಗುವುದು ಹಾಗೂ ವೃಷಣದ ಕ್ಯಾನ್ಸರ್ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೆಡಿಕವರ್ ಮಹಿಳಾ & ಮಕ್ಕಳ ಆಸ್ಪತ್ರೆ, ವೈಟ್‌ಫೀಲ್ಡ್‌ನ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ತಜ್ಞೆ ಡಾ. ಜಿ.ಹಾರಿಕಾ ರೆಡ್ಡಿ ತಿಳಿಸಿದ್ದಾರೆ.
ಇಳಿಯದ ವೃಷಣ ಎನ್ನುವುದು ಜನನಕ್ಕೂ ಮುನ್ನ ಅಥವಾ ಜನನದ ಕೆಲವೇ ದಿನಗಳಲ್ಲಿ ಒಂದು ಅಥವಾ ಎರಡೂ ವೃಷಣಗಳು ವೃಷಣಚೀಲಕ್ಕೆ (Scrotum) ಇಳಿಯದೆ ಉಳಿಯುವ ಸ್ಥಿತಿಯಾಗಿದೆ. ಕೆಲ ಮಕ್ಕಳಲ್ಲಿ ಮೊದಲ ಕೆಲವು ತಿಂಗಳೊಳಗೆ ಇದು ಸಹಜವಾಗಿ ಸರಿಯಾಗಬಹುದು. ಆದರೆ ಆರು ತಿಂಗಳ ವಯಸ್ಸಿನ ನಂತರವೂ ವೃಷಣ ಇಳಿಯದಿದ್ದರೆ ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞರಿಂದ ತಕ್ಷಣ ಪರೀಕ್ಷೆ ಮಾಡಿಸಬೇಕು ಎಂದು ಅವರು ಹೇಳಿದರು.

ಡಾ. ಹರಿಕಾ ರೆಡ್ಡಿ ಅವರ ಪ್ರಕಾರ, ಮಗುವಿನ ಪ್ರತಿಯೊಂದು ನಿಯಮಿತ ಆರೋಗ್ಯ ತಪಾಸಣೆಯಲ್ಲೂ ಎರಡೂ ವೃಷಣಗಳು ಸರಿಯಾದ ಸ್ಥಾನದಲ್ಲಿವೆಯೇ ಎಂಬುದನ್ನು ಪರೀಕ್ಷಿಸುವುದು ಅತ್ಯಗತ್ಯ. ಆರು ತಿಂಗಳ ನಂತರವೂ ವೃಷಣ ಇಳಿಯದಿದ್ದರೆ, ಮೊದಲೇ ಇಳಿದಿದ್ದ ವೃಷಣ ಮತ್ತೆ ಮೇಲಕ್ಕೆ ಹೋಗಿದ್ದರೆ ಅಥವಾ ಎರಡೂ ವೃಷಣಗಳು ಸ್ಪರ್ಶಕ್ಕೆ ಸಿಗದಿದ್ದರೆ ತಕ್ಷಣ ತಜ್ಞರನ್ನು ಸಂಪರ್ಕಿಸಬೇಕು ಎಂದು ಅವರು ಸಲಹೆ ನೀಡಿದರು.
ಮಗುವಿಗೆ ವಯಸ್ಸಾಗುವವರೆಗೆ ಕಾಯುವುದು, ಲಕ್ಷಣಗಳು ಕಾಣಿಸಿಕೊಳ್ಳುವವರೆಗೆ ಚಿಕಿತ್ಸೆ ಮುಂದೂಡುವುದು ಅಥವಾ ತಜ್ಞರನ್ನು ಸಂಪರ್ಕಿಸುವ ಮೊದಲು ಅನಗತ್ಯ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿಸುವ ಅಗತ್ಯವಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞರ ವೈದ್ಯಕೀಯ ಪರೀಕ್ಷೆಯೇ ಸೂಕ್ತ ಚಿಕಿತ್ಸೆಯನ್ನು ನಿರ್ಧರಿಸಲು ಸಾಕಾಗುತ್ತದೆ ಎಂದು ಅವರು ಹೇಳಿದರು.
ಈ ಸಮಸ್ಯೆಗೆ ‘ಆರ್ಕಿಯೋಪೆಕ್ಸಿ’ (Orchiopexy) ಶಸ್ತ್ರಚಿಕಿತ್ಸೆಯನ್ನು 6 ರಿಂದ 12 ತಿಂಗಳೊಳಗೆ, ಗರಿಷ್ಠ 18 ತಿಂಗಳೊಳಗೆ ಮಾಡಿಸುವುದು ಉತ್ತಮ. ಇದು ವೃಷಣದ ಸಹಜ ಬೆಳವಣಿಗೆಗೆ ನೆರವಾಗುವುದರ ಜೊತೆಗೆ ಭವಿಷ್ಯದ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಕಾಪಾಡಲು ಹಾಗೂ ಇತರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ ಎಂದು ಡಾ. ಹರಿಕಾ ರೆಡ್ಡಿ ತಿಳಿಸಿದರು.
“ಜನನದ ಸಮಯದ ಪರೀಕ್ಷೆ ಮಾತ್ರ ಸಾಕಾಗುವುದಿಲ್ಲ. ಮಗುವಿನ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲೂ ವೃಷಣಗಳ ಸ್ಥಿತಿಯನ್ನು ಪರಿಶೀಲಿಸಬೇಕು. ವೃಷಣವು ತಾತ್ಕಾಲಿಕವಾಗಿ ಮೇಲಕ್ಕೆ ಹೋಗಿದೆಯೇ ಅಥವಾ ನಿಜವಾಗಿಯೂ ಇಳಿಯದ ವೃಷಣವೇ ಎಂಬ ಬಗ್ಗೆ ಅನುಮಾನವಿದ್ದರೆ ವಿಳಂಬ ಮಾಡದೆ ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞರನ್ನು ಸಂಪರ್ಕಿಸಬೇಕು,” ಎಂದು ಡಾ. ಹರಿಕಾ ರೆಡ್ಡಿ ಹೇಳಿದರು.

ಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಪೋಷಕರು ತಮ್ಮ ಮಕ್ಕಳಿಗೆ ನಿಯಮಿತ ಆರೋಗ್ಯ ತಪಾಸಣೆ ಮಾಡಿಸುವಂತೆ ಮನವಿ ಮಾಡಿದ್ದು, ಆರಂಭಿಕ ಹಂತದಲ್ಲೇ ಸಮಸ್ಯೆಯನ್ನು ಪತ್ತೆಹಚ್ಚಿ ಸಮಯೋಚಿತ ಚಿಕಿತ್ಸೆ ನೀಡುವುದರಿಂದ ಮಕ್ಕಳ ಆರೋಗ್ಯಕರ ಭವಿಷ್ಯವನ್ನು ಕಾಪಾಡಬಹುದು ಎಂದು ತಿಳಿಸಿದೆ.




Leave a Reply