ಬೆಂಗಳೂರು: ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚರಿಸುವ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ (SMVT) ನಲ್ಲಿ ತುರ್ತು ವೈದ್ಯಕೀಯ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಒದಗಿಸುವ ಉದ್ದೇಶದಿಂದ ನೈರುತ್ಯ ರೈಲ್ವೆ ಹಾಗೂ ಮೆಡಿಕವರ್ ಆಸ್ಪತ್ರೆ ಸಹಯೋಗದಲ್ಲಿ 24×7 ಉಚಿತ ಆಂಬ್ಯುಲೆನ್ಸ್ ಸೇವೆ ಆರಂಭಿಸಲಾಗಿದೆ. ಈ ಸೇವೆಯು ರೈಲ್ವೆ ಪ್ರಯಾಣಿಕರು, ನೈರುತ್ಯ ರೈಲ್ವೆ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೆ ಸಂಪೂರ್ಣ ಉಚಿತವಾಗಿ ಲಭ್ಯವಿರಲಿದೆ.
ಈ ಹಿಂದೆ ಎಸ್ಎಂವಿಟಿ ರೈಲ್ವೆ ನಿಲ್ದಾಣದಲ್ಲಿ ತುರ್ತು ಆರೋಗ್ಯ ಸಮಸ್ಯೆ ಉಂಟಾದ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಸೇವೆ ತಲುಪುವುದೇ ದೊಡ್ಡ ಸವಾಲಾಗಿತ್ತು. ತುರ್ತು ಕರೆ ಮಾಡಿದರೂ ನಗರದ ವಾಹನ ದಟ್ಟಣೆಯಿಂದಾಗಿ ಆಂಬ್ಯುಲೆನ್ಸ್ ಸಮಯಕ್ಕೆ ನಿಲ್ದಾಣ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ರೋಗಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆಗೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗುವಂತಹ ಪರಿಸ್ಥಿತಿಗಳು ಎದುರಾಗುತ್ತಿದ್ದವು. ಈ ಸಮಸ್ಯೆಯನ್ನು ಮನಗಂಡು, ಮೆಡಿಕವರ್ ಆಸ್ಪತ್ರೆಯು ರೈಲ್ವೆ ನಿಲ್ದಾಣದಲ್ಲೇ 24×7 ಉಚಿತ ಆಂಬ್ಯುಲೆನ್ಸ್ ಅನ್ನು ಶಾಶ್ವತವಾಗಿ ನಿಯೋಜಿಸಿದ್ದು, ತುರ್ತು ಸಂದರ್ಭಗಳಲ್ಲಿ ಕೆಲವೇ ನಿಮಿಷಗಳಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸುರಕ್ಷಿತವಾಗಿ ಸಾಗಿಸುವ ವ್ಯವಸ್ಥೆ ಕಲ್ಪಿಸಿದೆ. ಈ ಸೇವೆಯಿಂದ ತುರ್ತು ಚಿಕಿತ್ಸೆಗಾಗಿ ವ್ಯರ್ಥವಾಗುವ ಅಮೂಲ್ಯ ಸಮಯ ಉಳಿಯಲಿದ್ದು, ಅನೇಕ ಜೀವಗಳನ್ನು ರಕ್ಷಿಸಲು ನೆರವಾಗಲಿದೆ.
ಸಾಮಾನ್ಯವಾಗಿ ನಗರದ ವಿವಿಧ ಭಾಗಗಳಿಂದ ಆಂಬ್ಯುಲೆನ್ಸ್ ರೈಲ್ವೆ ನಿಲ್ದಾಣಕ್ಕೆ ತಲುಪಲು ಒಂದು ಗಂಟೆಯಿಂದ ಒಂದೂವರೆ ಗಂಟೆಯವರೆಗೆ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಈಗ ಎಸ್ಎಂವಿಟಿ ರೈಲ್ವೆ ನಿಲ್ದಾಣದಲ್ಲೇ 24 ಗಂಟೆಗಳ ಕಾಲ ಆಂಬ್ಯುಲೆನ್ಸ್ ಲಭ್ಯವಿರುವುದರಿಂದ ತುರ್ತು ಪರಿಸ್ಥಿತಿಯಲ್ಲಿ ಯಾವುದೇ ವಿಳಂಬವಿಲ್ಲದೆ ತಕ್ಷಣ ವೈದ್ಯಕೀಯ ನೆರವು ದೊರೆಯಲಿದೆ. ಅಪಘಾತ, ಹೃದಯಾಘಾತ, ಪಾರ್ಶ್ವವಾಯು ಹಾಗೂ ಇತರ ತುರ್ತು ಆರೋಗ್ಯ ಸಮಸ್ಯೆಗಳಲ್ಲಿ ಈ ಸೇವೆಯು ಜೀವ ರಕ್ಷಕವಾಗಲಿದೆ.

ಮೆಡಿಕವರ್ ಆಸ್ಪತ್ರೆಯ ಈ ವಿಶೇಷ ಆಂಬ್ಯುಲೆನ್ಸ್ನಲ್ಲಿ ಅತ್ಯಾಧುನಿಕ ಜೀವ ರಕ್ಷಕ ವೈದ್ಯಕೀಯ ಉಪಕರಣಗಳು, ಆಮ್ಲಜನಕ ವ್ಯವಸ್ಥೆ, ಅಗತ್ಯ ತುರ್ತು ಚಿಕಿತ್ಸೆ ಸಾಧನಗಳು ಹಾಗೂ ಪ್ರಾಥಮಿಕ ವೈದ್ಯಕೀಯ ಕಿಟ್ (Primary Medical Kit) ಅಳವಡಿಸಲಾಗಿದೆ. ಜೊತೆಗೆ ಅನುಭವಿ ನರ್ಸ್ ಹಾಗೂ ತರಬೇತಿ ಪಡೆದ ಚಾಲಕರು 24×7 ಸೇವೆಗೆ ನಿಯೋಜನೆಯಾಗಿದ್ದು, ರೋಗಿಯನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಅಗತ್ಯ ಪ್ರಾಥಮಿಕ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ.

ಈ ಸೇವೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೆಡಿಕವರ್ ಆಸ್ಪತ್ರೆಯ ರೀಜನಲ್ ಡೈರೆಕ್ಟರ್ ಸಿದ್ದಾರೆಡ್ಡಿ, ನೈರುತ್ಯ ರೈಲ್ವೆಯ ಪ್ರಿನ್ಸಿಪಲ್ ಚೀಫ್ ಮೆಡಿಕಲ್ ಡೈರೆಕ್ಟರ್ ಡಾ. ಎಸ್. ಶೋಭಾ ಜಾಸ್ಮಿನ್, ಹೆಚ್ಚುವರಿ ಮುಖ್ಯ ವೈದ್ಯಕೀಯ ನಿರ್ದೇಶಕ ಡಾ. ವಿನೋದ್ ರಾಥೋಡ್, ಸೇರಿದಂತೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಮೆಡಿಕವರ್ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಮೆಡಿಕವರ್ ಆಸ್ಪತ್ರೆಯ ರೀಜನಲ್ ಡೈರೆಕ್ಟರ್ ಸಿದ್ದಾರಡ್ಡಿ ಮಾತನಾಡಿ, “ಮೆಡಿಕವರ್ ಆಸ್ಪತ್ರೆಯ ಪ್ರಮುಖ ಧ್ಯೇಯವು ಗುಣಮಟ್ಟದ ಆರೋಗ್ಯ ಸೇವೆಯನ್ನು ಜನರ ಬಳಿಗೆ ತಲುಪಿಸುವುದಾಗಿದೆ. ತುರ್ತು ಚಿಕಿತ್ಸೆಯಲ್ಲಿ ಪ್ರತಿಯೊಂದು ನಿಮಿಷವೂ ಅತ್ಯಂತ ಅಮೂಲ್ಯ. ಎಸ್ಎಂವಿಟಿ ರೈಲ್ವೆ ನಿಲ್ದಾಣದಲ್ಲಿ ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಅವರಿಗೆ ಹಾಗೂ ನೈರುತ್ಯ ರೈಲ್ವೆ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಯಾವುದೇ ವಿಳಂಬವಿಲ್ಲದೆ ವೈದ್ಯಕೀಯ ನೆರವು ದೊರೆಯಬೇಕು ಎಂಬ ಉದ್ದೇಶದಿಂದ ಈ 24×7 ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಿದ್ದೇವೆ. ರೈಲ್ವೆ ನಿಲ್ದಾಣದಲ್ಲೇ ಆಂಬ್ಯುಲೆನ್ಸ್ ಲಭ್ಯವಿರುವುದರಿಂದ ತುರ್ತು ಪರಿಸ್ಥಿತಿಯಲ್ಲಿ ಅಮೂಲ್ಯ ಸಮಯ ಉಳಿಯಲಿದ್ದು, ಅನೇಕ ಜೀವಗಳನ್ನು ರಕ್ಷಿಸಲು ಸಾಧ್ಯವಾಗಲಿದೆ. ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು, ಪ್ರಾಥಮಿಕ ಚಿಕಿತ್ಸೆ ಕಿಟ್, ಅನುಭವಿ ನರ್ಸ್ ಹಾಗೂ ತರಬೇತಿ ಪಡೆದ ಚಾಲಕರೊಂದಿಗೆ ಈ ಸೇವೆ ಕಾರ್ಯನಿರ್ವಹಿಸಲಿದ್ದು, ಆಸ್ಪತ್ರೆಗೆ ತಲುಪುವ ಮುನ್ನವೇ ರೋಗಿಗೆ ಅಗತ್ಯವಾದ ತುರ್ತು ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಸಮಾಜದ ಆರೋಗ್ಯ ಮತ್ತು ಜೀವ ರಕ್ಷಣೆಯೇ ನಮ್ಮ ಆದ್ಯತೆ. ಮುಂದಿನ ದಿನಗಳಲ್ಲಿಯೂ ಇಂತಹ ಸಾರ್ವಜನಿಕ ಹಿತದಾಯಕ ಸೇವೆಗಳನ್ನು ಇನ್ನಷ್ಟು ವಿಸ್ತರಿಸಲು ಮೆಡಿಕವರ್ ಆಸ್ಪತ್ರೆ ಬದ್ಧವಾಗಿದೆ,” ಎಂದು ಹೇಳಿದರು.
ಈ ಉಚಿತ ಆಂಬ್ಯುಲೆನ್ಸ್ ಸೇವೆಯು ನೈರುತ್ಯ ರೈಲ್ವೆ ಮತ್ತು ಮೆಡಿಕವರ್ ಆಸ್ಪತ್ರೆಯ ನಡುವಿನ ಸಾರ್ವಜನಿಕ ಆರೋಗ್ಯ ಸಹಭಾಗಿತ್ವದ ಮಹತ್ವದ ಹೆಜ್ಜೆಯಾಗಿದ್ದು, ಪ್ರಯಾಣಿಕರ ಸುರಕ್ಷತೆ, ತ್ವರಿತ ವೈದ್ಯಕೀಯ ನೆರವು ಹಾಗೂ ತುರ್ತು ಆರೋಗ್ಯ ಸೇವೆಯ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಮಾದರಿಯಾಗಲಿದೆ.





Leave a Reply